ಅಭಿಪ್ರಾಯ / ಸಲಹೆಗಳು

ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ

ಸರ್ವಜ್ಞರು ತಮ್ಮ ತ್ರಿಪದಿಯಲ್ಲಿ – “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ರಾಟಿ  ನಡೆಯುವುದು ಮೇಟಿಯಿಂದಲೆ ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲ”  ಎಂದು ತಿಳಿಸಿದಂತೆ ನಮ್ಮ ಬಹುಪಾಲು ಆಹಾರ ಬೇಡಿಕೆಯನ್ನು ಪೂರೈಸುವ ಕೃಷಿ, ನಮ್ಮ ನಾಡಿನ ಜನರ ಏಕೈಕ ವೃತ್ತಿಯಾಗಿದ್ದುದು ಇಂದಿಗೂ ಗ್ರಾಮೀಣ ಪ್ರದೇಶದ ಪ್ರತಿಶತ 68 ರಷ್ಟು ಜನರ ಕಸುಬಾಗಿಯೇ ಮುಂದುವರೆದಿರುವುದು, ಹಾಗೂ ಕೃಷಿ ಅವಲಂಬಿತ ಉದ್ದಿಮೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುತ್ತಿರುವುದು ಕೃಷಿ ಕ್ಷೇತ್ರದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

 

            ಮಾನವ ತನ್ನ ಆಹಾರಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುತ್ತುವ ಅಲೆಮಾರಿ ಪ್ರವೃತ್ತಿಯನ್ನು ಬಿಟ್ಟು ಒಂದು ಸ್ಥಳದಲ್ಲಿ ವಾಸ ಮಾಡುತ್ತಾ, ಬೀಜಗಳನ್ನು ಬಿತ್ತಿ/ನೆಟ್ಟು ಉತ್ಪಾದನೆ ಮಾಡಿದಂದಿನಿಂದ ಕೃಷಿ ಪ್ರಾರಂಭವಾಯಿತೆನ್ನಬಹುದು.  ಪೃಕೃತಿ ನಿಯಮದಂತೆ, ತಾನಾಗಿ ಬೆಳೆಯುತ್ತಿದ್ದ ಗಿಡ ಮರ ಇತ್ಯಾದಿ ಸಸ್ಯಗಳನ್ನು ಅನುಸರಿಸಿ, ಕೃಷಿ ಮಾಡುವ ಪರಿಪಾಠ ಸುಮಾರು 6,000 ವರ್ಷಗಳಿಂದ ನಡೆದು ಬಂದಿದೆ ಎಂದು ಅಂದಾಜು ಮಾಡಲಾಗಿದೆ. ವರ್ಷಗಳು ಕಳೆದಂತೆ ಅವನು ಭೂಮಿಯನ್ನು ಹದ ಮಾಡುವ, ಬೀಜಗಳನ್ನು ಆರಿಸುವ ಉತ್ತನ್ನಗಳನ್ನು ಸಂಗ್ರಹಿಸುವಲ್ಲಿ ನೈಪುಣ್ಯತೆಗಳಿಸುತ್ತಾ ಬಂದನು.  ಕೃಷಿ ಕಾರ್ಯಚಟುವಟಿಕೆಗಳನ್ನು ಹೆಚ್ಚಿನ ಶ್ರಮವಿಲ್ಲದೆ ಕೈಗೊಳ್ಳಲು ಹಲವಾರು ಸಲಕರಣೆ/ಉಪಕರಣಗಳನ್ನು ತಯಾರಿಸಿ ಬಳಸಲು ಪ್ರಾರಂಭಿಸಿದನು.

 

            ಕೃಷಿಯಲ್ಲಿ ಜ್ಞಾನ ಮತ್ತು ಮಾಹಿತಿಯು ಕ್ರೋಢೀಕೃತವಾಗುತ್ತಾ ಒಂದು ಸಂತತಿಯಿಂದ ಮುಂದಿನ ಸಂತತಿಗೆ ವರ್ಗಾವಣೆಯಾಗಲು ಪ್ರಾರಂಭಗೊಂಡಿತು.  ಇದನ್ನು ಸಾಂಪ್ರಾದಾಯಿಕ (ಟ್ರೇಡಿಷನಲ್) ಕೃಷಿಯೆಂದು ಹೇಳಬಹುದು.

 

            ರಾಜ್ಯದಲ್ಲಿ ಕೃಷಿ ಬೆಳೆದು ಬಂದ ಹಾದಿಯನ್ನು ಅವಲೋಕಿಸಿದಾಗ ಹೆಚ್ಚು ಕುತೂಹಲ ಮೂಡುತ್ತದೆ.  17 ಮತ್ತು 18ನೇ ಶತಮಾನಗಳಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಮತ್ತು ಪ್ರಾಣಿ ಶಾಸ್ತ್ರಗಳಲ್ಲಿನ ಜ್ಞಾನಾಭಿವೃದ್ಧಿಯಂತೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಯಿತು.  ಆದರೆ, ಪಶ್ಚಿಮ ಯೂರೋಪ್ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಆ ಸಮಯದಲ್ಲಿ ನಮ್ಮ ರಾಷ್ಟ್ರದಲ್ಲಿ ಯೂರೋಪ್ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಮುನ್ನಡೆ ಆ ಸಮಯದಲ್ಲಿ ನಮ್ಮ ರಾಷ್ಟ್ರದಲ್ಲಿ ಕಂಡುಬರಲಿಲ್ಲ.  ಆದರೆ, ರಾಷ್ಟ್ರದ ಇನ್ನಾವುದೇ ರಾಜ್ಯಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಂಡು ಬಾರದಿದ್ದರೂ, ಅಂದಿನ ಮೈಸೂರು ರಾಜ್ಯದಲ್ಲಿ 18ನೇ ಶತಮಾನದಲ್ಲಿಯೇ ಮಾರಿಶಿಯಸ್ ದ್ವೀಪದಿಂದ ಕಬ್ಬಿನ ತಳಿಗಳನ್ನು ತರಿಸಿ, ಅಭಿವೃದ್ಧಿ ಪಡಿಸಿರುವ ಬಗ್ಗೆ ದಾಖಲೆಗಳಿದ್ದು, ಕೃಷಿ ಅಭಿವೃದ್ಧಿಯ ನಾಂದಿ, 18ನೇ ಶತಮಾನದಿಂದಲೇ ಪ್ರಾರಂಭವಾಯಿತೆನ್ನಬಹುದು.  19ನೇ ಶತಮಾನದಲ್ಲಿ ಅಂದಿನ ಮೈಸೂರು ರಾಜ್ಯದಲ್ಲಿ ವೈಜ್ಞಾನಿಕ ಕೃಷಿ, ಪಶುಸಂಗೋಪನೆ ಮತ್ತು ತೋಟಗಾರಿಕೆ ಅಭಿವೃದ್ಧಿಗೆ ಮೈಸೂರಿನ ಒಡೆಯರ್ ರವರು ಚಾಲನೆ ನೀಡಿದರು.  20ನೇ ಶತಮಾನದ ಪೂರ್ವಾರ್ಧದಲ್ಲಿ, ಅಂದರೆ, 1913ರ ಜುಲೈ 5ರಂದು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಕೃಷಿ ಇಲಾಖೆಯನ್ನು ಸ್ಥಾಪಿಸಲಾಯಿತು.  ಮೊದಲನೇ ಕೃಷಿ ನಿರ್ದೇಶಕರಾಗಿ ಡಾ|| ಲೆಸ್ಲಿ ಸಿ. ಕೋಲ್ಮನ್ ರವರು ಕಾರ್ಯಭಾರ ವಹಿಸಿಕೊಂಡರು.  ಅಂದು ಪ್ರಾರಂಭವಾದ ಕೃಷಿ ಇಲಾಖೆ ರೈತರ ಏಳಿಗೆಗಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

            ಕರ್ನಾಟಕ ರಾಜ್ಯದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಒಂದು ನಿರಂತರ ಹಾಗೂ ಸಂಕೀರ್ಣ ರೂಪದ, ಕ್ಲಿಷ್ಟಕರ ಸವಾಲಿನ, ಗುರುತರ ಕಾರ್ಯವಾಗಿದೆ.  ಕೃಷಿ ಕ್ಷೇತ್ರದ ಒಂದು ಶತಮಾನದ ಅಭಿವೃದ್ಧಿಯ ಕಾರ್ಯಪಥದಲ್ಲಿ ಕೃಷಿಯ ಮೂಲ ಉದ್ದೇಶದಲ್ಲಿಯೇ ಸಾಕಷ್ಟು ಬದಲಾವಣೆಗಳಾಗಿವೆ.  ಹಂತಹಂತವಾಗಿ ಕೇವಲ ಜೀವನೋಪಾಯಕ್ಕಾಗಿ (subsistence farming) ಮಾಡಲಾಗುತ್ತಿದ್ದ ಕೃಷಿಯು ಕುಟುಂಬದ ಬೇಡಿಕೆಗಳಿಗೆ ಮೀರಿದ ಉತ್ಪಾದನೆ (subsistence farming) ಮಾಡಲಾಗುತ್ತಿದ್ದ ಕೃಷಿಯು ಕುಟುಂಬದ ಬೇಡಿಕೆಗಳಿಗೆ ಮೀರಿದ ಉತ್ಪಾದನೆ (surplus farming) ಹಂತಕ್ಕೆ ತಲುಪಿ ನಂತರ ಮಾರುಕಟ್ಟೆ ಕೃಷಿ (market farming) ಯಾಗಿ ಪರಿವರ್ತಿತವಾರಿ ಇಂದು ಕೃಷಿ ಕ್ಷೇತ್ರ ವಾಣಿಜ್ಯ ಕೃಷಿಯಾಗಿ (Commercial farming) ಬದಲಾವಣೆಯಾಗಿದೆ.  ಆದರೆ, ಹೆಚ್ಚಿನ ಮಳೆಯಾಶ್ರಿತ ಪ್ರದೇಶದ ಮೇಲಿನ ಅವಲಂಬನೆ, ಅತಿ ಹೆಚ್ಚಿನ ಪ್ರಮಾಣದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಹೊಂದಿರುವ, ಕನಿಷ್ಠ ಆರ್ಥಿಕ ಮಟ್ಟಕ್ಕೂ ಕಡಿಮೆ ಹಿಡುವಳಿ ಗಾತ್ರಗಳನ್ನು ಹೊಂದಿರುವುದರಿಂದ ಮೇಲ್ಕಂಡ ನಾಲ್ಕು ಹಂತದ ಕೃಷಿ ಪದ್ಧತಿಗಳು ಇಂದಿಗೂ ಮುಂದುವರೆದಿರುವುದು ವಿಪರ್ಯಾಸ.  ಹೀಗಾಗಿ ನಮ್ಮ ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿ ಅತ್ಯಂತ ಕ್ಲಿಷ್ಟಕರ.  ಆದಾಗ್ಯೂ ನಮ್ಮ ರಾಜ್ಯ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಸಾಧಿಸಿ, ಅಭಿವೃದ್ಧಿ ಕಾರ್ಯಾಗಳಲ್ಲಿ ಮುಂಚೂಣಿ ಸ್ಥಾನ ಗಳಿಸಿದೆ.  ಸೃಜನಶೀಲ, ಪ್ರಗತಿಪರ, ಉದ್ಯಮಶೀಲ ರೈತರು ಮತ್ತು ಕೃಷಿ ಅಭಿವೃದ್ಧಿಗೆ ರಾಜ ಮಹಾರಾಜರ, ಆಂಗ್ಲರ ಆಳ್ವಿಕೆ ಕಾಲದಿಂದಲೂ ನೀಡಿದ ಪ್ರಾಧಾನ್ಯತೆ, ಸ್ವಾತಂತ್ರ್ಯನಂತರ ಜನಪ್ರಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾಳಜಿ, ಕೃಷಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣವೆನ್ನಬಹುದು.  ರೈತರ ಬೇಡಿಕೆ, ಜನರ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆಗನುಗುಣವಾಗಿ, ಕಾಲಾನುಕಾಲಕ್ಕೆ, ನೂತನ ಯೋಜನೆಗಳನ್ನು ಹೊರತಂದು, ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.

 

            ನಮ್ಮ ರಾಜ್ಯ, ಇಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಹತ್ತಾರು ಕ್ಷೇತ್ರಗಳಲ್ಲಿ ಅಪಾರವಾದ ಪ್ರಗತಿಯನ್ನು ಸಾಧಿಸಿದೆ.  ಅಲ್ಲದೆ ಆಹಾರೋತ್ಪಾದನೆಯಲ್ಲಿ ಪೂರ್ಣ ಸಾಧನೆಯನ್ನು ಸಾಧಿಸಿ ಸಾಕಷ್ಟು ಪ್ರಮಾಣದಲ್ಲಿ ಇತರೆ ದೇಶಗಳಿಗೆ ಕೃಷಿ ಉತ್ಪನ್ನಗಳನ್ನು ಹಾಗೂ ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡುವ ಸಾಮರ್ಥ್ಯ ಪಡೆದಿರುತ್ತದೆ.  ಸ್ವಾತಂತ್ರ್ಯ ಪೂರ್ವ ವರ್ಷಗಳಲ್ಲಿ ಹಾಗೂ 1950 ದಶಕದಲ್ಲಿದ್ದ ಕೇವಲ 35 ಲಕ್ಷ ಟನ್ ಗೂ ಮೀರದ ಆಹಾರೋತ್ಪಾದನೆ ಇಂದು 110 ರಿಂದ 120 ಲಕ್ಷ ಟನ್ ಗಳಿಗೆ ಏರಿಕೆಯಾಗಿದೆ.  ಸರ್ವಕಾಲಿಕ ದಾಖಲೆ ಆಹಾರೋತ್ಪಾದನೆ 140.4 ಲಕ್ಷ ಟನ್ ನ್ನು ರಾಜ್ಯವು 2010-11 ರಲ್ಲಿ ಸಾಧಿಸಿದೆ.  ಕೃಷಿ, ಜೀವನಾಧಾರ ಹಂತದಿಂದ ವಾಣಿಜ್ಯ ಹಂತವನ್ನು ತಲುಪಿರುತ್ತದೆ.  ಭಾರತ ದೇಶ, ವಿಶ್ವ ವ್ಯಾಪಾರ ಸಂಸ್ಥೆ ಸದಸ್ಯ ರಾಷ್ಟ್ರವಾಗಿದ್ದು, ಜಾಗತೀಕರಣ ಹಾಗೂ ಉದಾರ ವ್ಯಾಪಾರ ನೀತಿಯಿಂದಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಡನೆ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ತೀವ್ರ ಪೈಪೋಟಿಯನ್ನು ನಡೆಸಬೇಕಿರುತ್ತದೆ.  ಗ್ರಾಹಕರ ಆಹಾರ ಪದ್ಧತಿಗಳಲ್ಲಿ ಕ್ರಮೇಣ ಬದಲಾವಣೆ, ಆರೋಗ್ಯಕರ ಆಹಾರ ಸೇವನೆಗೆ ಒಲವು ತೋರುತ್ತಿರುವುದರಿಂದ ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ಹೆಚ್ಚುತ್ತಿದೆ.  ಸಂಸ್ಕರಿಸಿದ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಾ ಸಾಗಿದೆ.  ಸಾವಯವ ಕೃಷಿ, ಒಪ್ಪಂದ ಕೃಷಿ, “ಪ್ರಿಸಿಷನ್ ಫಾರ್ಮಿಂಗ್ “ ಪದ್ಧತಿಗಳು ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ.  ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದಿನಂತೆ ಕೇವಲ ಇಳುವರಿ ಮತ್ತು ಉತ್ಪಾದನೆ ಹೆಚ್ಚಳ ಸಾಧಿಸುವುದೊಂದೇ ಗುರಿ ಇಟ್ಟುಕೊಳ್ಳದೇ, ಗುಣಮಟ್ಟದ ಉತ್ಪಾದನೆಯೆಡೆಗೆ ಹಾಗೂ ಕಟಾವು ನಂತರ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಪ್ಯಾಕಿಂಗ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ.

            19ನೇ ಶತಮಾನದಲ್ಲಿ ಹಲವಾರು ಕೃಷಿ ಅಭಿವೃದ್ಧಿ ಕಾರ್ಯಗಳನ್ನು ಮೈಸೂರಿನ ಒಡೆಯರ್ ಕಾಲದಲ್ಲಿ ಪಾರಂಭಿಸಲಾಯಿತು.  ಮೈಸೂರು ಸಂಸ್ಥಾನದಲ್ಲಿ 1834ರಿಂದ 1861 ರವರೆಗೆ ಆಂಗ್ಲರು ನೇಮಿಸಿದ್ದ ಸರ್.ಮಾರ್ಕ್ ಕಬ್ಬನ್ ರವರು ರಾಜ್ಯದ ಕೃಷಿ ಸಾಮರ್ಥ್ಯವನ್ನು ಮನಗಂಡು 1830 ರಲ್ಲಿ ವೈಜ್ಞಾನಿಕ ಕೃಷಿಯನ್ನು ರೂಢಿಸುವ ಮುಂಚೂಣಿ ಅಭಿವೃದ್ಧಿ ಪ್ರಯತ್ನಗಳನ್ನು ಕೈಗೊಂಡರು ಹಾಗೂ ಮೈಸೂರು ಕೃಷಿ ಸಂಘವನ್ನು ಸ್ಥಾಪಿಸಲು ಕಾರಣರಾದರು.  ಈಗಿನ ಲಾಲ್ ಬಾಗ್ ತೋಟವನ್ನು ಆಗ ಬೆಂಗಳೂರು ಸಸ್ಯ ತೋಟವೆಂದು ಕರೆಯಲಾಗುತ್ತಿತ್ತು ಹಾಗೂ ತೋಟಗಾರಿಕಾ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸಲು 1857 ರಲ್ಲಿ ಶ್ರೀ. ವಿಸ್ತರ್ ನ್ಯೂ ರವರನ್ನು ಆ ತೋಟದ ಅಧೀಕ್ಷಕರನ್ನಾಗಿ ನೇಮಿಸಲಾಗಿತ್ತು.  ರೇಷ್ಮೆ ಕೃಷಿಗೆ ಮೈಸೂರು ಪ್ರಾಂತ್ಯವು ಹೆಸರುವಾಸಿಯಾಗಿದ್ದುದು ಇದರಿಂದ 1862 ರಲ್ಲಿ ಶ್ರೀ. ಸಿಗ್ನೋರ್ಡಿ ವಿಚ್ಚಿ ರವರು ಹೊಸ ರೇಷ್ಮೆ ಹುಳುಗಳು ಮತ್ತು ಹಿಪ್ಪುನೇರಳೆ ತಳಿಗಳನ್ನು ರಾಜ್ಯಕ್ಕೆ ಪರಿಚಯಿಸಿ ರೇಷ್ಮೆ ಕೃಷಿಗೆ ಹೊಸ ಆಯಾಮವನ್ನು ತಂದುಕೊಟ್ಟರು.  ಇದೇ ರೀತಿ ಮೈಸೂರು ಸಂಸ್ಥಾನದಲ್ಲಿ ವೈಜ್ಞಾನಿಕ ಅರಣ್ಯ ಕೃಷಿಗೆ ಚಾಲನೆ ಕೊಟ್ಟ ಕೀರ್ತಿಯು ಆಗಿನ ಜನರಲ್ ಆಫ್ ಪೋಲೀಸ್ ರವರನ್ನು ಅರಣ್ಯ, ತೋಟಗಾರಿಕೆ ಯೋಜನೆಗಳ ಪ್ರಭಾರಾಧಿಕಾರಿಯನ್ನಾಗಿ ಮತ್ತು ನಿರ್ದೇಶಕರು, ಕೃಷಿ ಇಲಾಖೆ ಮತ್ತು ಸಾಂಖ್ಯಿಕ ಇಲಾಖೆಗೆ ನೇಮಿಸಲಾಯಿತು.  19ನೇ ಶತಮಾನದ ಅಂತ್ಯದಲ್ಲಿ ಬ್ರಿಟೀಷ್ ಸರ್ಕಾರವು ದೇಶದಲ್ಲಿ ಸತತವಾಗಿ ತಲೆದೋರುತ್ತಿದ್ದ ಕ್ಷಾಮ, ಹಸಿವಿನಿಂದ ಆಗತ್ತಿದ್ದ ಸಾವು-ನೋವುಗಳನ್ನು ತಡೆಯಲು ಅನಿವಾರ್ಯವಾಗಿ ಕೃಷಿ ಅಭಿವೃದ್ಧಿಯೆಡೆಗೆ ಗಮನಹರಿಸಿತು.  ಬ್ರಿಟೀಷ್ ಕೇಂದ್ರ ಸರ್ಕಾರವು ಕ್ಷಾಮ ಆಯೋಗ (ಫ್ಯಾಮಿನ್ ಕಮಿಷನ್) ದ ಶಿಫಾರಸ್ಸಿನಂತೆ 1871 ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿತು.  1880ರ ಅಂತ್ಯದೊಳಗೆ ಬ್ರಿಟೀಷ್ ‘ಪ್ರಾವಿನ್ಸ್’ಗಳಲ್ಲಿ ಕೇಂದ್ರದ ಮಾದರಿಯಂತೆ ಕೃಷಿ ಇಲಾಖೆಗಳು ಪ್ರಾರಂಭಗೊಂಡವು.  ಈ ಹಿನ್ನೆಲೆಯಲ್ಲಿ ದೂರದೃಷ್ಟಿಯ ಮೈಸೂರು ಅರಸರ ಆಡಳಿತ ವ್ಯವಸ್ಥೆಯು, 1899ರಲ್ಲಿ ಜರ್ಮನ್ ದೇಶದ ಡಾ|| ಎ.ಲೆಹಮನ್ ಎನ್ನುವ ಕೃಷಿ ರಸಾಯನ ಶಾಸ್ತ್ರಜ್ಞನನ್ನು ಮೈಸೂರು ರಾಜ್ಯದ ಮಣ್ಣುಗಳನ್ನು ವಿಶ್ಲೇಷಿಸಿ ಅವುಗಳನ್ನು ಉತ್ತಮ ಪಡಿಸಲು ಸೂಕ್ತ ಸಲಹೆಗಳನ್ನು ನೀಡಲು ಒಂದು ಪ್ರಯೋಗಾಲಯದ ಮುಖ್ಯಸ್ಥನನ್ನಾಗಿ ನೇಮಿಸಿತು.  ರಾಜ್ಯದ ಕೃಷಿ ಅಭಿವೃದ್ಧಿಯ ಪ್ರಸ್ತಾಪ ಬಂದಾಗ ಮೈಸೂರು ಸಂಸ್ಥಾನವನ್ನು 1894 ರಿಂದ 1940 ರವರೆಗೆ ಆಳಿದ ಮಹಾರಾಜರಾದ ರಾಜಶ್ರೀ ನಾಲ್ಮಡಿ ಕೃಷ್ಣರಾ ಒಡೆಯರ್ ರವರನ್ನು ಸ್ಮರಿಸಲೇಬೇಕು.  ರಾಜ್ಯದ ಕೃಷಿ ಸಾಮರ್ಥ್ಯವನ್ನು ಅರಿತ ಶ್ರೀಯುತರು ಅದಕ್ಕಾಗಿ ನಿಯತವಾಗಿ ಅನೇಕ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಿ ಕೃಷಿಯ ವಿವಿಧ ಕ್ಷೇತ್ರಗಳಲ್ಲಿ ರಾಜ್ಯವನ್ನು ರಾಷ್ಟ್ರದಲ್ಲಿಯೇ ಅಗ್ರಗಾಮಿಯಾಗುವಂತೆ ಮಾಡಿದರು.  1905ರಲ್ಲಿ ಕೀಟ ಮತ್ತು ಶೀಲೀಂದ್ರ ತಜ್ಞರ ಹುದ್ದೆಯನ್ನು ರಾಜ್ಯದಲ್ಲಿ ಸೃಷ್ಠಿಸಿ, ಅದರ ಮುಖ್ಯಸ್ಥರನ್ನಾಗಿ ಡಾ|| ಲೆಸ್ಲಿ.ಸಿ.ಕೋಲ್ಮನ್ ರವರನ್ನು ನೇಮಿಸಿತು.  ಅಡಿಕೆಯಲ್ಲಿನ ಕೊಳೆ ರೋಗ ಮತ್ತು ಕಾಫಿ ಬೆಳೆಯಲ್ಲಿನ ರೋಗಗಳ ಹತೋಟಿಗೆ ಬೋರ್ಡೊ ಮಿಶ್ರಣದ ಬಳಕೆಯನ್ನು ಇವರು ಪ್ರಚಲಿತಗೊಳಿಸಿ ಆ ಬೆಳೆಗಳನ್ನು ಸಂರಕ್ಷಿಸಿದರು.  ಡಾ|| ಕೋಲ್ಮನ್ ರವರು ಡಾ|| ಲೆಹಮನ್ ರವರ ಕರ್ತವ್ಯವನ್ನು ಸಹ 1907 ರಲ್ಲಿ ವಹಿಸಿಕೊಂಡರು.  ಇವರ ಶಿಫಾರಸ್ಸಿನ ಮೇರೆಗೆ ರಾಜ್ಯದಲ್ಲಿ ಕಂದಾಯ ಇಲಾಖೆಯ ಒಂದು ಭಾಗವಾಗಿದ್ದ ಕೃಷಿಯನ್ನು 1912 ರಲ್ಲಿ ಪ್ರತ್ಯೇಕಗೊಳಿಸಲಾಯಿತು.  1913ರ ಜುಲೈ 5ರಂದು ಮೈಸೂರು ಸರ್ಕಾರವು ಕೃಷಿಗೆ ನೂತನ ವೈಜ್ಙನಿಕ ರೂಪವನ್ನು ನೀಡಲು ಡಾ|| ಲೆಸ್ಲಿ.ಸಿ.ಕೋಲ್ಮನ್ ರವರನ್ನು ಮೊಟ್ಟ ಮೊದಲನೆಯ ಕೃಷಿ ನಿರ್ದೇಶಕರನ್ನಾಗಿ ನೇಮಿಸಿತು.  ಅದೇ ದಿನದಂದು ಏಷ್ಯಾ ಖಂಡದಲ್ಲಿಯೇ ಮೊದಲನೆಯದಾದ ಮೆಟ್ರಿಕ್ಯುಲೇಟ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನಾಲ್ಕು ಖಂಡದಲ್ಲಿಯೇ ಮೊದಲನೆಯದಾದ ಮೆಟ್ರಿಕ್ಯುಲೇಟ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕೃಷಿ ಡಿಪ್ಲೊಮೊ ಶಿಕ್ಷಣವನ್ನು ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರಾರಂಭಿಸಿದ ಕೀರ್ತಿಯು ಸಹ ಇವರಿಗೆ ಸಲ್ಲುತ್ತದೆ.  ಕೋಲ್ಮನ್ ರವರು 1913-1934 ರವರೆಗೆ ಕೃಷಿ ಅಭಿವೃದ್ಧಿಯಲ್ಲಿ ಅತ್ಯಂತ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದರು.

            ಇವರ ನೇತೃತ್ವದಲ್ಲಿ, ಸ್ಥಳೀಯ ಕೃಷಿ ಸಮಸ್ಯೆಗಳ ನಿವಾರಣೆಗಾಗಿ ತುಮಕೂರು ಜಿಲ್ಲೆಯ, ಚಿಕ್ಕನಹಳ್ಳಿಯಲ್ಲಿ 1916ರಲ್ಲಿ ಕೃಷಿ ಶಾಲೆಯೊಂದನ್ನು ಸ್ಥಾಪಿಸಿದರು.  ನಂತರ, ಇದೇ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ, ಬೆಂಗಳೂರು ಜಿಲ್ಲೆ ಆನೇಕಲ್ ನಲ್ಲಿ ಹಾಗೂ ಮಿಕ್ಕೆಡೆಗಳಲ್ಲಿ ಕೃಷಿ ಶಾಲೆಗಳನ್ನು ಪ್ರಾರಂಭಿಸಿದರು.  ಕಬ್ಬು ಮತ್ತು ಭತ್ತದ ಬೆಳೆಗಳಲ್ಲಿ ನೀರಾವರಿ ಕೃಷಿಗೆ ಸಂಬಂಧಿಸಿದಂತೆ ಮಂಡ್ಯದ ಕೆ.ಆರ್.ಎಸ್.ನ ವಿಶ್ವೇಶ್ವರಯ್ಯ ಕಾಲುವೆ ಪ್ರದೇಶದ 600 ಎಕರೆ ಪ್ರದೇಶದಲ್ಲಿ ಪ್ರಯೋಗ ಕ್ಷೇತ್ರವನ್ನು 1930 ರಲ್ಲಿ ಸ್ಥಾಪಿಸಿದರು.  ಮಂಡ್ಯದ ಸಕ್ಕರೆ ಕಾರ್ಖಾನೆ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರಲ್ಲದೆ, ಮರ್ತೂರಿನಲ್ಲಿ ಅಡಿಕೆ ಸಂಶೋಧನೆ ಕ್ಷೇತ್ರ, ಕಾಫಿ ಸಂಶೋಧನೆಗಾಗಿ ಬಾಳೆಹೊನ್ನೂರು ಕ್ಷೇತ್ರ, ಹತ್ತಿ ಸಂಶೋಧನೆಗಾಗಿ ಬಬ್ಬೂರು ಕ್ಷೇತ್ರವನ್ನು ಪ್ರಾರಂಭಿಸಿದರು.  ಹೀಗೆ ಡಾ|| ಕೋಲ್ಮನ್ ಹಾಗೂ ಅವರ ಸಹೋದ್ಯೋಗಿಗಳು ಮೈಸೂರು ರಾಜ್ಯದ ರೈತರಲ್ಲಿ, ರಾಜ್ಯದ ಕೃಷಿ ಸಾಮರ್ಥ್ಯಕ್ಕೆ ಹಾಗೂ ಪ್ರಗತಿಯ ಬಗ್ಗೆ ಇರುವ ಅವಕಾಶಗಳ ಕುರಿತು ಕ್ರಿಯಾಶೀಲ ಜಾಗೃತಿಯನ್ನು ಮೂಡಿಸುವಲ್ಲಿ ಸಫಲರಾದರು.  ಡಾ|| ಕೋಲ್ಮನ್ ರವರು ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ರಾಜ್ಯವು ಇಂದಿಗೂ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತದೆ.

            1946 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಅಂಗವಾದ ಮೈಸೂರು ಕೃಷಿ ಕಾಲೇಜಿನಲ್ಲಿ ಬಿ.ಎಸ್ಸಿ ಕೃಷಿ ಪದವಿ ಕಾರ್ಯಕ್ರಮ ಪ್ರಾರಂಭಗೊಂಡಿತು.  1956 ಮತ್ತು ಅದರ ಹಿಂದೆ ಕೃಷಿ ವಿಸ್ತರಣೆ, ಶಿಕ್ಷಣ ಮತ್ತು ಸಂಶೋಧನೆಯ ಅಂಗಗಳೆಲ್ಲವೂ ಕೃಷಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದವು.  ಅಲ್ಲದೆ, ಕೃಷಿ ಇಲಾಖೆಯು ಕೃಷಿ ಬೆಳೆಗಳೊಂದಿಗೆ, ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳ ಬಗ್ಗೆಯೂ ಚಟುವಟಿಕೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿತ್ತು.  1963ರಲ್ಲಿ ರಾಜ್ಯ ಸರ್ಕಾರವು ಕೃಷಿ ಇಲಾಖೆಯ ಅಧೀನಕ್ಕೊಳಪಟ್ಟಿದ್ದ ಎಲ್ಲಾ ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಮತ್ತು ಸಂಶೋಧನಾ ಕೇಂದ್ರಗಳನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ ಹೊಸದಾಗಿ ಸ್ಥಾಪಿಸಲಾದ ತೋಟಗಾರಿಕೆ ಇಲಾಖೆಗೆ ವಹಿಸಿತು.  ಹೀಗೆ ಕೃಷಿ ಇಲಾಖೆಯು ಕೃಷಿ ಬೆಳೆಗಳಾದ:- ಏಕದಳ, ದ್ವಿದಳ ಧಾನ್ಯಗಳು, ಎಣ್ಣೆಕಾಳು, ಹತ್ತಿ, ಕಬ್ಬು ಮತ್ತು ತಂಬಾಕು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಮತ್ತು ಕೃಷಿ ಶಿಕ್ಷಣ ಹಾಗೂ ಸಂಶೋಧನೇ ಕಾರ್ಯಗಳನ್ನು ಉಳಿಸಿಕೊಂಡಿತು.  ಆದರೆ, 1965ರಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಸ್ಥಾಪಿತಗೊಂಡು ಎಲ್ಲಾ ಕೃಷಿ ಸಂಶೋಧನೆ ಯೋಜನೆ ಕಾರ್ಯಕ್ರಮಗಳನ್ನು ಹಾಗೂ ಕೃಷಿ ಕಾಲೇಜುಗಳನ್ನು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಲಾಯಿತು.  ಹೀಗೆ 1965ರಲ್ಲಿ ಕೃಷಿ ಇಲಾಖೆಯಡಿ ಕೃಷಿ ವಿಸ್ತರಣೆ, ರೈತರ ತರಬೇತಿ, ಕೃಷಿ ಪರಿಕರ ಸರಬರಾಜು ಮತ್ತು ಸೇವೆ ಮಾತ್ರಕ್ಕಾಗಿ ಸೀಮಿತಗೊಂಡಿತು.

            ಸೇವೆ ಮಾತ್ರಕ್ಕಾಗಿ ಸೀಮಿತಗೊಂಡಿತು.

 

 

 

“ನೇಗಿಲ ಕುಳದೊಳಗಡಗಿದೆ ಕರ್ಮ

ನೇಗಿಲ ಮೇಲೆ ನಿಂತಿದೆ ಧರ್ಮ”

                                                                    - ಕುವೆಂಪು

“ಕೃಷಿ ಆರಂಭವಾದಲ್ಲಿ, ಇತರೆ ಕಲೆಗಳು ಅದನ್ನು ಹಿಂಬಾಲಿಸುವುವು.

ಆದ್ದರಿಂದ, ರೈತರೇ ಮಾನವ ನಾಗರೀಕತೆಯ ಸ್ಥಾಪಕರು”

                                                                                      - ಡೇನಿಯಲ್ ವೆಬ್ ಸ್ಟರ್

 

 

 

ಇತ್ತೀಚಿನ ನವೀಕರಣ​ : 21-12-2019 04:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080